ಅಬುಪರ್ವತ
	
ದಕ್ಷಿಣ ರಾಜಾಸ್ಥಾನದ ಅಂಚಿನಲ್ಲಿ ಅಡ್ಡಲಾಗಿ ಹಬ್ಬಿರುವ ಅರಾವಳೀ ಪರ್ವತಗಳಲ್ಲಿ ಅಬು ನಗರದ ಹತ್ತಿರ ಕಾಣಬರುವ ದೊಡ್ಡ ಪರ್ವತ. ಉತ್ತರ ಅಕ್ಷಾಂಶ 24"-40"; ಪೂರ್ವ ರೇಖಾಂಶ 72' - 45'. ಪ್ರದೇಶದ ಜನಸಂಖ್ಯೆ ಸುಮಾರು 4,439 (1951). ಉತ್ತರ ಅಹಮದಾಬಾದಿಗೆ 110 ಮೈಲಿ ದೂರದಲ್ಲಿದೆ. ಏಳು ಮೈಲಿ ಅಗಲವಾಗಿರುವ ಒಂದು ನದೀಕಣಿವೆ ಉಳಿದ ಬೆಟ್ಟಗಳ ಸಾಲಿನಿಂದ ಪರ್ವತವನ್ನು ಪ್ರತ್ಯೇಕಿಸಿದೆ. ಈ ಕಣಿವೆಯಲ್ಲಿ ಪಶ್ಚಿಮ ಬಾನಸ್ ಎಂಬ ನದಿ ಹರಿಯುವುದು. ಈ ಪರ್ವತ ಮೈದಾನದ ನಡುವೆ ಇರುವ ಕಡಿದಾದ ಗ್ರಾನೈಟ್ ಶಿಲಾದ್ವೀಪದಂತೆ ತೋರುವುದು. ಎತ್ತರ 4000' ಗಳಿಂದ 5650' ಗಳ ವರೆಗೆ.

	ಪರ್ವತದ ನೆತ್ತಿಯಲ್ಲಿ ಮತ್ತು ಪೀಠಭೂಮಿಗಳಲ್ಲಿ ವಿಶೇಷ ರೀತಿಯಲ್ಲಿ ಕೊರೆದಿರುವ ಜೈನ ಬಸದಿಗಳೂ ದೇವಾಲಯಗಳೂ ಗೋಪುರಗಳೂ ಇವೆ. ಕನಿಷ್ಠಪಕ್ಷ 2000 ವರ್ಷಗಳಿಂದಲೂ ಯಾತ್ರಾಸ್ಥಳವಾಗಿವೆ. ಮಹಾಭಾರತದಲ್ಲಿ ಇದನ್ನು ಅರ್ಬುದ ಎಂದು ಉಲ್ಲೇಖಿಸಲಾಗಿದೆ. ಶಿಖರದ ಮೇಲುಭಾಗದಲ್ಲಿ ಒಂದು ವೃತ್ತಾಕಾರದ ಪೀಠಭೂಮಿಯಲ್ಲಿ ಗ್ರಾನೈಟ್ ಶಿಲೆಯ ಗುಹೆ ಇದೆ. ಇದರಲ್ಲಿ ಪುರಾಣಗಳಲ್ಲಿ ಹೇಳಿರುವಂತೆ ವಿಷ್ಣುವಿನ ಅವತಾರವೆನಿಸಿದ ದಾತ - ಭೃಗುವಿನ ಪಾದಗಳ ಹೆಜ್ಜೆ ಮೂಡಿದೆಯೆಂದು ನಂಬಲಾಗಿದೆ. ಈ ಶಿಖರದ ಮಧ್ಯದಲ್ಲಿ ದಿಲ್‍ವಾರಾ ಎಂಬ ಸ್ಥಳದಲ್ಲಿ ಅಮೃತಶಿಲೆಯಿಂದ ನಿರ್ಮಿಸಲಾದ ಎರಡು ಪ್ರಸಿದ್ಧ ದೇವಾಲಯಗಳಿವೆ. ಇವು ಗುಜರಾತಿನ ವಾಸ್ತುಶಿಲ್ಪವನ್ನು ತೋರಿಸುವ ಮಾದರಿಯಾಗಿವೆ.  ಜೈನರ ಪ್ರಖ್ಯಾತವಾದ ಐದು ಪವಿತ್ರ ಕ್ಷೇತ್ರಗಳಲ್ಲಿ ಇದೂ ಒಂದು. ಇಲ್ಲಿ ಜೈನ ದೇವಾಲಯಗಳಲ್ಲದೆ ಜೈನ ಶಾಸನಗಳೂ ಇವೆ.

	ಇತ್ತೀಚಿನವು ಎನಿಸಿದ ಎರಡು ದೇವಸ್ಥಾನಗಳಲ್ಲಿ ಒಂದಾದ ತೇಜಪಾಲ್ ದೇವಸ್ಥಾನವನ್ನು ಇಬ್ಬರು ಶ್ರೀಮಂತ ವ್ಯಾಪಾರೀ ಸಹೋದರರು (ತೇಜಪಾಲ್ ಮತ್ತು ವಸ್ತುಪಾಲ್) 1197 ಮತ್ತು 1247ರ ಮಧ್ಯಂತರದಲ್ಲಿ ಕಟ್ಟಿಸಿದರೆಂದೂ ಮತ್ತೊಂದು ಸೋಳಾಂಕ ಚಕ್ರವರ್ತಿಗಳ ಮಾಂಡಲಿಕ ವಿಮಲಷಾಹ ಎಂಬುವನಿಂದ 1032ರಲ್ಲಿ ಕಟ್ಟಿಸಲಾಯಿತೆಂದೂ ಭಾವಿಸಲಾಗಿದೆ. ಈ ದೇವಸ್ಥಾನಗಳು ಅವುಗಳ ಒಳಭಾಗದ ಗೋಪುರಗಳಲ್ಲಿ ಕೊರೆದಿರುವ ಶಿಲ್ಪಕಲೆಗೆ ಪ್ರಸಿದ್ಧವಾಗಿರುವುದಲ್ಲದೆ ಅವಕ್ಕೆ ಸರಿಸಮವಾದುವು ಇನ್ನೊಂದಿಲ್ಲ ಎನಿಸಿವೆ. ಇವು ಜೈನರ ವಾಸ್ತುಶಿಲ್ಪ ಸೌಂದರ್ಯಾಭಿರುಚಿಗೂ ಪ್ರಸಿದ್ಧವಾಗಿವೆ. ವಿಮಲಷಾಹ ದೇವಸ್ಥಾನದ ಪ್ರಾಮುಖ್ಯತೆಯೆಂದರೆ ಗರ್ಭಗುಡಿಯಲ್ಲಿ ಪ್ರತಿಷ್ಠಿಸಿರುವ ಜೈನರ 23ನೆಯ ತೀರ್ಥಂಕರ ಪಾಶ್ರ್ವನಾಥ ವಿಗ್ರಹದ ಮೇಲೆ ಗವಾಕ್ಷದಿಂದ ಬೀಳುವ ಬೆಳಕು. ಈ ದೇವಸ್ಥಾನದ ಮೇಲಿರುವ ಮುಖಮಂಟಪ 48 ಸಾಲಂಕೃತ ಸಾಲುಗಂಬಗಳ ಮೇಲಿದೆ. ದೇವಸ್ಥಾನ ದೀರ್ಘಚತುರಸ್ರಾಕೃತಿಯಲ್ಲಿದ್ದು (140' ಉದ್ದ ಮತ್ತು 90' ಅಗಲ) ಅದರ ಸುತ್ತಳತೆಯಲ್ಲಿ 52 ಗರ್ಭಗುಡಿಗಳಿವೆ. ಪ್ರತಿ ಗುಡಿಯಲ್ಲೂ ಪಾಶ್ರ್ವನಾಥನ ವಿಗ್ರಹವಿದೆ. ಹೊರನೋಟಕ್ಕೆ ಈ ದೇವಾಲಯಗಳು ಸಾಧಾರಣವಾಗಿ ಕಾಣುತ್ತವೆ. ಆದರೆ ಒಳಭಾಗದಲ್ಲಿನ ಕಂಬಗಳು, ಕಮಾನುಗಳು, ದುಂಡು ಗುಮ್ಮಟ, ಮೂರ್ತಿಗಳು, ಕುಸುರಿ ಕೆತ್ತನೆಯ ಮೋಹಕ ಕೃತಿಗಳು - ಇವುಗಳಿಗೆ ಜಗತ್ಪ್ರಸಿದ್ಧವಾಗಿವೆ. ಆ ಮಂದಿರಗಳಲ್ಲಿ ಅಮೃತಶಿಲೆಯಲ್ಲಿ ಮಾಡಿರುವ ಕೆತ್ತನೆಯ ಕೆಲಸವನ್ನು ಕಾಗದದ ಮೇಲೆ ಚಿತ್ರಿಸಲು ಕೂಡ ತಾನು ಅಸಮರ್ಥನಾಗಿರುವುದಾಗಿಯೂ ಅಲ್ಲಿಯ ಕಲೆ ಅಷ್ಟು ಸೂಕ್ಷ್ಮವಾಗಿಯೂ ಚೆಲುವಾಗಿಯೂ ಇದೆ ಎಂದೂ ಡಾ. ಫಗ್ರ್ಯೂಸನ್ ಬೆರಗಾಗಿ ಹೇಳಿದ್ದಾನೆ. ಐತಿಹ್ಯದ ಪ್ರಕಾರ ಈ ಶಿಖರದ ಸುತ್ತಲೂ ಇದ್ದ ಅಗ್ನಿಕುಂಡದಿಂದ ಅಗನಿಕುಲ ಸಂಭೂತರಾದ ರಜಪೂತರು ಉದ್ಭವಿಸಿದರೆಂಬ ಪ್ರತೀತಿಯಿದೆ. ಇದು ಪ್ರಾಯಶಃ ರಜಪೂತವಂಶದ ಪಾವಿತ್ರ್ಯ, ಶುದ್ಧಚಾರಿತ್ರ್ಯ ಹಾಗೂ ವರ್ಣಸಂಕರ ನಿಷೇಧವನ್ನು ಹೇಳಲು ಉಲ್ಲೇಖಿಸಿರಬಹುದು. ಮಹಾಭಾರತ, ಪುರಾಣಗಳಲ್ಲಿ ವಸಿಷ್ಠ ಮುನಿಯ ಆಶ್ರಮ ಇಲ್ಲಿ ಇದ್ದಂತೆ ಹೇಳಿದೆ. ವಿಶ್ವಾಮಿತ್ರ ಕಾಮಧೇನುವನ್ನು ಅಪಹರಿಸಲು ಹೂಡಿದ ಕುತಂತ್ರವನ್ನು ನಿವಾರಿಸಲು ವಸಿಷ್ಠ ತನ್ನ ಯಜ್ಞಕುಂಡದಿಂದ ಪರಮಾರನೆಂಬ ವೀರನನ್ನು ಸೃಜಿಸಿದನೆಂದೂ ಈತನೇ ರಜಪೂತವಂಶದ ಪೂರ್ವಜನೆಂದೂ ಐತಿಹ್ಯವಿದೆ.

ಅಬು ಬಹುಮಟ್ಟಿಗೆ ಪರ್ವತಧಾಮವೆನಿಸಿದ್ದರೂ ಜೈನರ ಮುಖ್ಯ ಯಾತ್ರಾಸ್ಥಳ ಹಾಗೂ ರಾಜಾಸ್ಥಾನದ ಬೇಸಿಗೆಯ ರಾಜಧಾನಿಯಾಗಿದೆ. ಸರಾಸರಿ ಉಷ್ಣಾಂಶ 700 ಫ್ಯಾ. ನಷ್ಟಿರುತ್ತದೆ. ಏಪ್ರಿಲ್ ತಿಂಗಳಿನಲ್ಲಿ 900 ವರೆಗೂ ಹೆಚ್ಚುತ್ತದೆ. ಆದರೆ ಈ ಉಷ್ಣತೆ ಸಹಿಸಲಾರದಷ್ಟೇನಲ್ಲ. ಇಲ್ಲಿನ ವಾರ್ಷಿಕ ಮಳೆ ಪ್ರಮಾಣ 69"ಗಳಿಷ್ಟಿದೆ. 	
 
(ಎಸ್.ಎಂ.ಎ.; ಎಸ್.ಎನ್.; ಪಿ.ಬಿ.ಡಿ.; ಬಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ